ಇದು ಒಂದು ಕಾಲ್ಪನಿಕ ಸನ್ನಿವೇಶ: ಒಂದು ಸುಂದರ ಸಂಜೆಯಲ್ಲಿ ಓರ್ವ ಹುಡುಗನು ಪ್ರಕೃತಿಯ ಬದಲಾವಣೆಗಳ ಗಮನಿಸುತ್ತಾ, ತನಗೆ ತಿಳಿಯದೆ ತನ್ನ ಗೆಳತಿಯ ನೆನಪಿನ ಅಲೆಯಲ್ಲಿ ಸಿಲುಕಿ, ಕಳೆದ ಕ್ಷಣವ ನೆನೆದು ನೆನೆದು ಮೆಲುಕು ಹಾಕುತಿರುವ ಸಂದರ್ಭ.
ತಿಳಿತಂಪು ಗಾಳಿ ಸುಡುತಿರಲು ನೀನಿರದೆ ಅರೇಘಳಿಗೆ ನೀ ಬಂದು ಹೋಗ ಬಾರದೆ ಬೇಸರದಿ ಬೆಳಕು ತೆರಳಲು ಸರಿಸಿ ಪರದೆ ಹೇಳು ಸಿಹಿ ಗಾಯವೆ ಏಕೆ ಹೋದೆ ಮಾಸದೆ
ಯಾರು ತುಂಬಿದರು ಕತ್ತಲೊಳು ಈ ಸೌಂದರ್ಯವ ಮರೆಯಲು ಆಗದು ನಿನ್ನೊಡ ಕಳೆದ ಆ ಕ್ಷಣವ ಕವಿದ ಮೋಡ ಮುಚ್ಚಿದಂತೆ ಚಂದಿರನ ಅಂದವ ಪ್ರತಿಬಾರಿ ತರುವೆ ನೀ ನನ್ನೊಳು ಮಂದಹಾಸವ
ಅರಿಯೆನು ನಾ ಸರಿಗಮಪವ, ಆದರೆ ಹೊಮ್ಮಿದೆ ನಾದಸ್ವರ ನನ್ನೊಳಗೆ ಅರೆಯೆನು ನಾ ಕುಸುರಿ ಕಾವ್ಯವ, ಆದರೆ ಚಿಮ್ಮುತಿದೆ ಪದಗಳು ನನ್ನೆದೆಯೊಳಗೆ ಅಡಗಿ ಕೂತೆ ನೀ ಧರಿಸಿ ಮೌನವ, ಹುಡುಕಬಲ್ಲೆ ನಾ ನಿನ್ನ ಆ ಪದರಾಶಿಯೊಳಗೆ ಜೊತೆಗಿರುವಾಗ ಮರೆತೆ ನಾ ಇರುಳ, ನಾನೇ ಇರಬಹುದು ದೊಡ್ಡ ಮರುಳ ಜಗದೊಳಗೆ
ನನ್ನ ಅರಿವಿಗೆ ಬಾರದ ಈ ನನ್ನ ಹೊರ ತಂದೆ ನೀನು ಋಣಿ ಇರುವೆ ನಿನಗೆ ಮರೆಯದಿರು ಎಂದೂ ನಾನು ಜೊತೆಗಿರದೆ ಇದ್ದು, ಇದ್ದ, ಮುದ್ದು ಜೀವ ನೀನು ಸ್ಮರಿಸಿ ಬಾಳುವೆ ಈ ಜೀವವ ಮೆಲಕು ಹಾಕಿ ನಾನು